ಅರಿಷಿಣಗೋಡಿ, ಬಿ ಆರ್
(1943- ). ಭೀಮಪ್ಪ ರಂಗಪ್ಪ ಅರಿಷಿಣಗೋಡಿ, 31-12-1934ರಂದು ಬಾಗಿಲುಕೋಟೆ ಜಿಲ್ಲೆಯ ಬೆನಕಟ್ಟಿಯಲ್ಲಿ ಜನಿಸಿದರು. ತಾಯಿಯ ಹೆಸರು ಕಾಶವ್ವ. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ  ಭೀಮಪ್ಪ ಹದಿಮೂರನೆಯ ವಯಸ್ಸಿನಲ್ಲಿ ಬಾಗಿಲುಕೋಟೆಯ ಬಸವೇಶ್ವರ ಹೈಸ್ಕೂಲು ಸೇರಿದರು. ಮ್ಯಾಟ್ರಿಕ್ ಪಾಸಾದರು (1952) ಅಲ್ಲಿಯೇ ಇಂಟರಮೀಡಿಯೇಟ ಸೈನ್ಸ್ ಓದು ಮುಂದುವರಿಸಿದರು. ಆದರೆ ಅದೇ ವರುಷ ಕರುಳಿನ ತೊಂದರೆಯಿಂದಾಗಿ ವೈದ್ಯಕೀಯ ಉಪಚಾರದಲ್ಲಿ ಒಂದು ವರ್ಷ ಶಾಲೆ ತಪ್ಪಿತು. ಸಹಪಾಠಿಗಳು ಮುಂದೆ ಹೋಗಿದ್ದರು.  ಹಿಂದಿನ ಕ್ಲಾಸಿನಲ್ಲಿ ಕೂಡಲು ಇವರಿಗೆ ಮನಸ್ಸಾಗಲಿಲ್ಲ. ಶಾಲೆ ಬಿಟ್ಟು ಊರಿಗೆ ಹೋಗಿ ತಂದೆಗೆ ಮುಖ ತೋರಿಸುವ ಧೈರ್ಯವೂ ಆಗಲಿಲ್ಲ. ಅಕ್ಕನ ಊರು ಹುನುಗುಂದ ತಾಲೂಕಿನ ಕಮತಗಿಗೆ ಹೋಗಿ ಅಲ್ಲಿ ಕಿರಾಣಿ ಅಂಗಡಿ ತೆರೆದು ವ್ಯಾಪಾರ ನಡೆಸಿದರು. 

ಸಾಲ ಕೊಡಲಿಲ್ಲವೆಂದು ಊರು ಹಿರಿಯನೊಬ್ಬ ಹೊಟ್ಟೆಕಿಚ್ಚಿನಿಂದ ತೂಕ ಮತ್ತು ಅಳತೆ ಅಧಿಕಾರಿಗಳಿಗೆ ಹೇಳಿ ಭೀಮಪ್ಪನ ಮೇಲೆ ಕೇಸು ಹಾಕಿಸಿದ. ಲಂಚ ಕೊಟ್ಟು ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿದ. ಈ ಘಟನೆ ತರುಣ ಭೀಮಪ್ಪನ ಬದುಕಿನಲ್ಲಿ ಹೊಸ ತಿರುವು ತಂದಿತು. ನಡೆದಿದ್ದ ಘಟನೆಯೇ ಭೀಮಪ್ಪನ ಬರವಣಿಗೆಯಿಂದ ನಾಟಕ ರೂಪ ಪಡೆಯಿತು. ಗೆಳೆಯರನ್ನು ಕಟ್ಟಿಕೊಂಡು ಭೀಮಪ್ಪ ಲಂಚಸಾಮ್ರಾಜ್ಯ ನಾಟಕವನ್ನಾಡಿದ. ಗೌಡನ ದೌರ್ಜನ್ಯವನ್ನು ನಾಟಕದ ಮೂಲಕ ಬಿಂಬಿಸಿದ. ಭೀಮಪ್ಪನ ಜಾಣತನಕ್ಕೆ ಊರ ರಸಿಕರು ಮೆಚ್ಚಿಕೊಂಡರು. ಜನರ ಅಪೇಕ್ಷೆ ಮೇರೆಗೆ ಮೇಲಿಂದ ಮೇಲೆ ನಾಟಕದ ಪ್ರಯೋಗಗಳಾದವು. ಬೇರೆ ಊರುಗಳಿಂದಲೂ ಕರೆ ಬಂದವು. ವ್ಯವಹಾರ ಕುಶಲ ಭೀಮಪ್ಪ ನಾಟಕ ಕಲೆಯನ್ನೇ ಕಾಯಕ ಮಾಡಿಕೊಳ್ಳಲು ಯೋಚಿಸಿದ. ಅಕ್ಕ ಮಾವನ ಸಹಕಾರ, ಗೆಳೆಯರ ಬೆಂಬಲ ಸಿಗಲು ಬಿ. ಆರ್. ಅರಿಷಿಣಗೋಡಿಯವರು ಶ್ರೀ ಹುಚ್ಚೇಶ್ವರ ನಾಟ್ಯ ಸಂಘ ಕಮತಗಿ ಎಂಬ ಹೆಸರಿನಿಂದ 31-12-1961ರಲ್ಲಿ ನಾಟಕ ಕಂಪನಿ ಹುಟ್ಟುಹಾಕಿದರು. 

ಕಂಪನಿ ಕಟ್ಟಿದ ಆರಂಭದಲ್ಲಿ ನಾಟಕ ಬರೆಯುವುದು, ನಟಿಸುವುದು, ಕಂಪನಿಯ ಮ್ಯಾನೇಜಮೆಂಟ್ ನೋಡುವುದು ಭೀಮಪ್ಪನವರ ಕೆಲಸವಾಯಿತು. ಕಂಪನಿ ಭದ್ರವಾಗಿ ನಿಂತ ಮೇಲೆ ಅಣ್ಣ ರಾಯಪ್ಪ ಮ್ಯಾನೇಜಮೆಂಟ ನೋಡಲು ಬಂದರು. ಅನುಭವಿ ಕಲಾವಿದರು ಸೇರಿದರು. ಕಂಪನಿಯ ತಿರುಗಾಟದ ಕ್ಷೇತ್ರವೂ ವಿಸ್ತಾರವಾಯಿತು. ಹುಚ್ಚೇಶ್ವರ ನಾಟ್ಯ ಸಂಘದ ಕೀರ್ತಿ ಎಲ್ಲ ಕಡೆಗೂ ಪಸರಿಸಿತು. ಅರಿಷಿಣಗೋಡಿಯವರೇ ಬರೆದಿದ್ದ ಕಣ್ಣಿದ್ದೂ ಕುರುಡ `ಇಲ್ಲಿಗೆ ಬಂತೋ ಸಂಗಯ್ಯ, ಬಸ್‍ಕಂಡಕ್ಟರ್ ನಾಟಕಗಳು ಯಶಸ್ವಿಯಾದವು. ಕಂಪನಿಯ ಮೊದಲ ಶಾಖೆ 1967ರಲ್ಲಿ ಆರಂಭಿಸಿದರು. 1977ರಲ್ಲಿ ಎರಡನೆಯ ಶಾಖೆ, 1984ರಲ್ಲಿ ಮೂರನೆಯ ಶಾಖೆ, ಪ್ರಾರಂಭಿಸಿ ಯಶಸ್ವಿಯಾಗಿ ನಡೆಸಿದರು. ಅಣ್ಣನ ಅಕಾಲಿಕ ನಿಧನದಿಂದ ಅವರು ನೋಡಿಕೊಳ್ಳಿತ್ತಿದ್ದ ಶಾಖಾ ಕಂಪನಿಗಳನ್ನು ನಿಲ್ಲಿಸುವುದು ಅನಿವಾರ್ಯವಾಯಿತು. 

ಒಳ್ಳೆಯ ನಿರ್ದೇಶನ, ದಕ್ಷ ಆಡಳಿತ, ಸದಭಿರುಚಿಯ ನಾಟಕಗಳ ರಚನೆಗಾಗಿ ಅರಿಷಿಣಗೋಡಿಯವರು ಹೆಸರಾದರು. ಧುತ್ತರಗಿ, ಹೂಗಾರ, ಎನ್.ಎಸ್.ಜೋಶಿ, ಎಸ್.ಎಂ.ಖೇಡಗಿ, ನಾದೇ ನರಸಿಂಹಮೂರ್ತಿ ಮುಂತಾದವರಿಂದಲೂ ನಾಟಕಗಳನ್ನು ಬರೆಸಿ ಆಡಿಸಿದರು. . ಅಬ್ಬಾಸ ಅಲಿ, ರಾಮಗೋಪಾಲ, ಶಂಕ್ರಯ್ಯ ರಕ್ಕಸಗಿ, ವಿರೂಪಾಕ್ಷಪ್ಪ ಮೈಂದರ್ಗಿ, ಗುರುಸಿದ್ಧಯ್ಯ ಇದ್ದಿಲಗಿ ಮುಂತಾದ ನಟರು, ಪ್ರಮಿಳಾ ಗುಡೂರ, ಶಾಂತಾಬಾಯಿ ಇಲಕಲ್, ಸುಲೋಚನಾ ಇಲಕಲ್, ಲಲಿತಾ ದಾವಣಗೆರೆ, ಮೂಲಶ್ರೀ ಮೈಸೂರು ಮುಂತಾದ ನಟಿಯರು ಕಮತಗಿ ಕಂಪನಿಯಲ್ಲಿದ್ದರು. ಇವರೆಲ್ಲ ಅರಿಷಿಣಗೋಡಿಯವರ ಬಣ್ಣದ ಬದುಕಿಗೆ ನೆರವಾದರು. 
ಬದಲಾದ ಸಾಂಸ್ಕøತಿಕ ಸಂದರ್ಭದಲ್ಲಿ ಸಾಲ ಮಾಡಿ ಅದೆಷ್ಟು ದಿನ ಕಂಪನಿ ನಡೆಸುವುದು? ಎಂದು ಅರಿಷಿಣಗೋಡಿಯವರು 2000ದವರೆಗೆ ಕಂಪನಿ ನಡೆಸಿ ರಂಗ ಸೇವೆಗ ವಿದಾಯ ಹೇಳಿದರು. ಇವರ ಅನುಭವದ ಪ್ರಕಾರ ಕಂಪನಿಗಳ ಸೋಲಿಗೆ ಪ್ರೇಕ್ಷಕರಿಗಿಂತ ಕಲಾವಿದರೇ ಕಾರಣ. ನಟನೆಯ ನಂತರ ಬಣ್ಣ ತೆಗೆದಷ್ಟೇ ಸುಲಭವಾಗಿ ಕಂಪನಿಗಳನ್ನು ಬದಲಿಸುತ್ತ ಹೋದರೆ ನಾಟಕ ಕಂಪನಿಗಳು ನಿಲ್ಲುವುದಾದರೂ ಹೇಗೆ? ಎಂಬುದು ಅರಿಷಿಣಗೋಡಿಯವರ ಪ್ರಶ್ನೆ.

ಲಂಚಸಾಮ್ರಾಜ್ಯದಲ್ಲಿ ಶಿಲಾಧರ, 'ಹೆಣ್ಣು ಮಗಳು ನಾಟಕದಲ್ಲಿ ಗಿರೀಶ, 'ಗರೀಬಿ ಹಟಾವೋದಲ್ಲಿ ಗುರುಬಸಪ್ಪ, 'ಸೈನಿಕನ ಸೋದರಿ'ಯಲ್ಲಿ ಸಂಜೀವ, `ಬಸ್ ಕಂಡಕ್ಟರದಲ್ಲಿ ಪ್ರದೀಪ-ಇವು ಅರಿಷಿಣಗೋಡಿಯವರು ಅಭಿನಯಿಸಿದ ಪಾತ್ರಗಳು. ಲಂಚಸಾಮ್ರಾಜ್ಯ, ಹೆಣ್ಣು ಮಗಳು, ಆಸ್ತಿಯ ಪಾಲು, ಅನುರಾಧಾ, ಬಸ್ ಕಂಡಕ್ಟರ್, ಸೈನಿಕನ ಸಹೋದರಿ, ಕಣ್ಣಿದ್ದೂ ಕುರುಡ, ಇಲ್ಲಿಗೆ ಬಂತೋ ಸಂಗಯ್ಯ, ಗರೀಬಿ ಹಟಾವೋ, ಗಂಡೆದೆಯ ಗೌರಿ, ಬಡವರೂ ನಗಬೇಕು, ಸಂಗ್ಯಾ ಬಾಳ್ಯಾ- ಇವು ಇವರು ರಚಿಸಿದ ನಾಟಕಗಳು. 

ಅರಿಷಿಣಗೋಡಿಯವರ ಕಲಾಸೇವೆ ಮೆಚ್ಚಿಕೊಂಡ ಪ್ರೇಕ್ಷಕರು ಹಲವರು ಪ್ರಶಸ್ತಿಗಳನ್ನು ಕೊಟ್ಟಿದ್ದಾರೆ. ಹುಬ್ಬಳ್ಳಿ-ಧಾರವಾಡ ನಾಗರಿಕರು 'ನಾಟ್ಯಕಲಾಭೂಷಣ' ಎಂದು, ಗದುಗಿನ ವೀರೇಶ್ವರ ಪುಣ್ಯಾಶ್ರಮದ ಡಾ. ಪುಟ್ಟರಾಜ ಗವಾಯಿಗಳು 'ನಾಟ್ಯ ಕಲಾತಿಲಕ ಎಂದು, ಅರಿಸೀಕೆರೆ  ಜನರು 'ನಾಟ್ಯಕಲಾಶ್ರೇಷ್ಠ ನೆಂದು, ಜೇವರಗಿಯ ಪ್ರೇಕ್ಷಕರು `ಕಲಾರಶ್ಮಿ ಎಂದು, ಅಥಣಿಯ ಜನರು `ಭಕ್ತ ಕಲಾಭೂಷಣ' ಎಂದು ಬಿರುದುಗಳನ್ನಿತ್ತು ಗೌರಸಿದ್ದಾರೆ. ಕರ್ನಾಟಕ ಸರಕಾರವು 1998ರಲ್ಲಿ 'ರಾಜ್ಯೋತ್ಸವ ಪ್ರಶಸ್ತಿಯನ್ನೂ 2003-04ರಲ್ಲಿ ಪ್ರತಿಷ್ಠಿತ 'ಗುಬ್ಬಿ ವೀರಣ್ಣ ಪ್ರಶಸ್ತಿ ಯನ್ನು ನೀಡಿ ಗೌರವಿಸಿದೆ. 

(ರಾಮಕೃಷ್ಣ ಮರಾಠೆ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ